ಚಾಮರಾಜ ಒಡೆಯರು-
	ಮೈಸೂರು ಸಂಸ್ಥಾನವನ್ನು ಆಳಿದ ಚಾಮರಾಜ ಎಂಬ ಹೆಸರಿನ ಮೈಸೂರಿನ ಒಡೆಯರ ಸಂತತಿಯ ಹತ್ತು ಬೇರೆ ಬೇರೆ ರಾಜರಿದ್ದಾರೆ. ಈ ಸಂತತಿಯ ದೊರೆಗಳ ಆಳ್ವಿಕೆಯ ಪ್ರಾರಂಭದ ಒಂದೆರಡು ಶತಮಾನಗಳ ಕಾಲದಲ್ಲಿದ್ದ ಈ ಹೆಸರಿನ ರಾಜರಿಗೆ ಸಂಬಂಧಿಸಿದ ಸಂಗತಿಗಳು ಬಹಳ ಕಡಿಮೆ ಮತ್ತು ಅಸ್ಪಷ್ಟ. ಒಂದನೆಯ ಚಾಮರಾಜ ಈ ಸಂತತಿಯ ಎರಡನೆಯ ರಾಜ. ಒಂದನೆಯ ಚಾಮರಾಜನನ್ನು ಹಿರೇ ಬೆಟ್ಟದ ಚಾಮರಾಜ ಎಂದು ಕರೆಯಲಾಗಿದೆ. ಒಡೆಯರ ವಂಶಾವಳಿಗೆ ಸಂಬಂಧಿಸಿದಂತೆ ಅರಮನೆಯಲ್ಲಿ ದೊರೆಯುವ ಆಧಾರಗಳ ಪ್ರಕಾರ ಹಿರೇ ಬೆಟ್ಟದ ಚಾಮರಾಜ ಯದುರಾಯನ ತರುವಾಯ 1423ರಿಂದ 1458ರ ವರೆಗೆ ಆಳಿದ. ಈ ವಂಶದ ಮೂಲ ಪುರುಷರಾದ ಯದುರಾಯ ಮತ್ತು ಕೃಷ್ಣರಾಯ ಎಂಬ ಕ್ಪತ್ರಿಯ ಸಹೋದರರು ಯಾದವ ವಂಶದವರೆಂದೂ ಅವರು ದ್ವಾರಕೆಯಿಂದ ಬಂದು ಇಲ್ಲಿ ರಾಜ್ಯ ಸ್ಥಾಪಿಸಿದರೆಂದೂ ಐತಿಹ್ಯವಿದೆ. ಯದುರಾಯ ಅಥವಾ ವಿಜಯನ ಅನಂತರ ಆಳಿದ ಹಿರೇ ಬೆಟ್ಟದ ಚಾಮರಾಜ (1ನೆಯ ಚಾಮರಾಜ) ಹಿರೇ ಚಾಮರಾಜ ಅಥವಾ ಆರುಬೆರಳು ಚಾಮರಾಜ (2ನೆಯ ಚಾಮರಾಜ 1478-1513) ಮತ್ತು ಬೆಟ್ಟದ ಚಾಮರಾಜ (3ನೆಯ ಚಾಮರಾಜ, 1513-1552) ಇವರ ಆಳ್ವಿಕೆಗೆ ಸಂಬಂಧಿಸಿದ ಸಂಗತಿಗಳು ತಿಳಿದುಬರುವುದಿಲ್ಲ. ಬೆಟ್ಟದ ಚಾಮರಾಜನಿಗೆ ತಿಮ್ಮರಾಜ, ಕೃಷ್ಣರಾಜ ಮತ್ತು ಬೋಳ ಚಾಮರಾಜ ಎಂಬ ಮೂವರು ಮಕ್ಕಳಿದ್ದರು. ಬೆಟ್ಟದ ಚಾಮರಾಜ ತನ್ನ ಮೂವರು ಮಕ್ಕಳಿಗೂ ರಾಜ್ಯವನ್ನು ಸಮನಾಗಿ ಹಂಚಿದ್ದ. ಮೈಸೂರು ಪ್ರದೇಶವನ್ನು ಕಿರಿಯನಾದ ಬೋಳ ಚಾಮರಾಜನಿಗೆ ಕೊಡಲಾಗಿತ್ತು. ತಿಮ್ಮರಾಜ ಮತ್ತು ಕೃಷ್ಣರಾಜರಿಗೆ ಮಕ್ಕಳಿರಲಿಲ್ಲವಾದ್ದರಿಂದ ಅವರ ಮರಣಾನಂತರ ಅವರ ಆಳ್ವಿಕೆಗೊಳಪಟ್ಟಿದ್ದ ಹೆಮ್ಮನಹಳ್ಳಿ ಮತ್ತು ಕೆಂಬಾಲ ಪ್ರದೇಶಗಳೂ ಬೋಳ ಚಾಮರಾಜನಿಗೇ ಸೇರಿದುವು.

ಚಾಮರಾಜ IV : ನಾಲ್ಕನೆಯ ಚಾಮರಾಜ ಅಥವಾ ಬೋಳ ಚಾಮರಾಜ 1571ರಿಂದ 1576ರವರೆಗೆ ಆಳಿದನೆಂದು ತಿಳಿದು ಬರುತ್ತದೆ. 1565ರ ತಾಳಿಕೋಟೆ ಕದನಾನಂತರ ಸಾಮಂತರ ಮೇಲೆ ವಿಜಯನಗರ ಸಾಮ್ರಾಜ್ಯದ ಪರಮಾಧಿಕಾರ ಸಡಿಲಗೊಂಡಿತು. ಆ ಸಂದರ್ಭದಲ್ಲಿ ಬೋಳ ಚಾಮರಾಜ ವರ್ಷಂಪ್ರತಿ ವಿಜಯನಗರಕ್ಕೆ ಕೊಡಲಾಗುತ್ತಿದ್ದ ಪೊಗದಿಯನ್ನು ನಿಲ್ಲಿಸಿದ. ಕಾಡುಪ್ರಾಣಿಗಳಿಂದ ತನ್ನ ರಾಜ್ಯದ ಬೆಳೆ ಹಾಳಾಗುತ್ತಿದೆಯೆಂಬ ನೆಪವೊಡ್ಡಿ ಆಯಕಟ್ಟಿನ ಗಡಿಪ್ರದೇಶದಲ್ಲಿ ಕೋಟೆ ಕಂದಕಗಳನ್ನು ನಿರ್ಮಿಸಿದ. ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡ ಅನಂತರ ಪೊಗದಿಯನ್ನು ಪಡೆಯಲು ಬಂದಿದ್ದ ವಿಜಯನಗರದ ಅಧಿಕಾರಿಗಳನ್ನು ಬೆದರಿಸಿ ಓಡಿಸಿದ. ಇದರಿಂದ ವಿಜಯನಗರದ ರಾಜಪ್ರತಿನಿಧಿ ಕೆರಳಿ ಚಾಮರಾಜನನ್ನು ಶಿಕ್ಷಿಸಲು ಹಂಚಿಕೆ ಹೂಡಿದ. ಒಮ್ಮೆ ಚಾಮರಾಜ ಶ್ರೀರಂಗಪಟ್ಟಣದ ರಂಗನಾಥ ದೇವಾಲಯದಲ್ಲಿ ಕೈಂಕರ್ಯದಲ್ಲಿ ತೊಡಗಿದ್ದಾಗ ವಿಜಯನಗರದ ಅಧಿಕಾರಿ ಅವನನ್ನು ಹಿಡಿಯಲು ಸಂಚು ನಡೆಸಿದ್ದ ಸುಳಿವನ್ನು ತಿಳಿದ ಚಾಮರಾಜ ಅಲ್ಲಿಂದ ತಪ್ಪಿಸಿಕೊಂಡದ್ದಲ್ಲದೆ ಪೊಗದಿಯನ್ನು ಕೊಡಲು ನಿರಾಕರಿಸಿದ.

ಚಾಮರಾಜ V : ಬೆಟ್ಟದ ಚಾಮರಾಜ. ಬೋಳ ಚಾಮರಾಜನ ಎರಡನೆಯ ಮಗ. ಅವನ ಮರಣಾನಂತರ ರಾಜನಾಗಿ 1576ರಿಂದ 1578ರವರೆಗೆ ಆಳಿದ. 5ನೆಯ ಚಾಮರಾಜ ಪರಾಕ್ರಮಿಯಾಗಿದ್ದರೂ ಆಡಳಿತಚತುರನಾಗಿರಲಿಲ್ಲ. ಆದರೆ ಹಿರಿಯನನ್ನು ಬಿಟ್ಟು ಕಿರಿಯನಾದ ಐದನೆಯ ಚಾಮರಾಜ ಸಿಂಹಾಸನಕ್ಕೆ ಬಂದದ್ದಕ್ಕೆ ಕಾರಣವೇನೆಂಬುದು ತಿಳಿದುಬರುವುದಿಲ್ಲ. ಈ ಕಾರಣದಿಂದಲೇ ಇವನ ಆಳ್ವಿಕೆ ಶೀಘ್ರವಾಗಿ ಕೊನೆಗೊಂಡಿರಬಹುದು. ಇವನ ಅಣ್ಣನೂ ಒಡೆಯರ ಸಂತತಿಯ ಪ್ರಸಿದ್ಧ ಪ್ರಭುಗಳಲ್ಲೊಬ್ಬರೂ ಆದ ರಾಜ ಒಡೆಯರ್ ಸಿಂಹಾಸನಕ್ಕೆ ಬಂದ.

ಚಾಮರಾಜ ಒಡೆಯರ್ VI : ಆಳ್ವಿಕೆ 1617-1637. ಶ್ರೀರಂಗಪಟ್ಟಣವನ್ನೂ ಅನೇಕ ಪಾಳೆಯಗಾರರನ್ನೂ ಸೋಲಿಸಿ, ಮೈಸೂರು ರಾಜ್ಯವನ್ನು ವಿಸ್ತರಿಸಿ ಆಡಳಿತಕ್ಕೆ ಒಂದು ವಿಶಿಷ್ಟ ರೂಪ ಕೊಟ್ಟು ಧರ್ಮ, ಕಲೆ ಮತ್ತು ಸಾಹಿತ್ಯವನ್ನು ಪೋಷಿಸಿ ಪ್ರಸಿದ್ಧನಾದ ರಾಜ ಒಡೆಯರ ಮೊಮ್ಮಗ. 6ನೆಯ ಚಾಮರಾಜ ತನ್ನ ತಾತನ ಮೇಲ್ಪಂಕ್ತಿಯನ್ನನುಸರಿಸಿ ರಾಜ್ಯವನ್ನು ವಿಸ್ತರಿಸಿದ. ಅವನು ಚನ್ನಪಟ್ಟಣವನ್ನು ವಶಪಡಿಸಿಕೊಂಡದ್ದಲ್ಲದೆ ಜಗದೇವರಾಯನನ್ನು ಸೋಲಿಸಿ ಅವನ ಪ್ರದೇಶಗಳನ್ನೆಲ್ಲ ತನ್ನ ರಾಜ್ಯಕ್ಕೆ ಸೇರಿಸಿಕೊಂಡ. ಧರ್ಮ ಮತ್ತು ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಿದ. ಜೈನಮತ ಕೇಂದ್ರವಾದ ಶ್ರವಣಬೆಳಗೊಳವನ್ನು ಸಂದರ್ಶಿಸಿ, ಅಲ್ಲಿಯ ಪ್ರಸಿದ್ಧ ಜೈನ ದೇವಾಲಯದ ಆರಾಧನೆ ಸೂಕ್ತವಾಗಿ ಮುಂದುವರಿಯಲು ಅನೇಕ ದಾನದತ್ತಿಗಳನ್ನು ನೀಡಿದ. ಇವನು 1637ರಲ್ಲಿ ಮರಣ ಹೊಂದಿದ.								(ಜಿ.ಆರ್.ಆರ್.)
ಚಾಮರಾಜ ರಚಿಸಿದ ಗ್ರಂಥಗಳು ಎರಡು : 1 ವಾಲ್ಮೀಕಿ ರಾಮಾಯಣ ಟೀಕೆ 2 ಬ್ರಹ್ಮೋತ್ತರ ಖಂಡ ಟೀಕೆ. ವಾಲ್ಮೀಕಿ ರಾಮಾಯಣ ಟೀಕೆಯನ್ನು ಚಾಮರಾಜೋಕ್ತಿವಿಲಾಸ ಎಂದೂ ಕರೆಯಲಾಗಿದೆ. ಇದು ಕನ್ನಡದಲ್ಲಿ ಮೂಲ ರಾಮಾಯಣವನ್ನನುಸರಿಸಿ ರಚಿತವಾದ ಪ್ರಥಮ ಗದ್ಯಕೃತಿ. ಗ್ರಂಥದ ಆದಿಯಲ್ಲಿಯೇ ಬರುವ ಒಂದು ಶ್ಲೋಕದಿಂದ ವಿರೂಪಾಕ್ಷನೆಂಬ ಪಂಡಿತ ಇದನ್ನು ರಚಿಸಿದನೆಂಬ ಅಭಿಪ್ರಾಯ ಬರುತ್ತದೆ. ಈತನ ಎರಡನೆಯ ಗ್ರಂಥ ಸ್ಕಾಂದ ಪುರಾಣದ ಬ್ರಹ್ಮೋತ್ತರಖಂಡಕ್ಕೆ ಬರೆದ ಕನ್ನಡ ವ್ಯಾಖ್ಯಾನ. ಇದರಲ್ಲಿ 22 ಅಧ್ಯಾಯಗಳಿವೆ. ಮಣಿಪ್ರಕಾಶ ಎಂದೂ ಈ ಗ್ರಂಥವನ್ನು ಕರೆಯಲಾಗಿದೆ.
ಸ್ವತಃ ಗ್ರಂಥ ರಚಿಸಿದನಲ್ಲದೆ ಚಾಮರಾಜ ಇತರರಿಗೂ ಪ್ರೋತ್ಸಾಹವಿತ್ತು ಶಾಸ್ತ್ರಗ್ರಂಥಗಳನ್ನು ಬರೆಯಿಸಿದ ಈತನ ಆಶ್ರಯದಲ್ಲಿಯೇ ರಾಮಚಂದ್ರನೆಂಬ ವಿದ್ವಾಂಸ ಅಶ್ವಶಾಸ್ತ್ರವನ್ನೂ ಪದ್ಮಣಪಂಡಿತ ಹಯಸಾರಸಮುಚ್ಚಯ ಎಂಬ ಪದ್ಯಗ್ರಂಥವನ್ನೂ ರಚಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಟೀಕೆ ಗದ್ಯರೂಪದ ವ್ಯಾಖ್ಯಾನಗಳು ಬರಲು ಚಾಮರಾಜನಿಂದ ದೊರೆತ ಪ್ರೋತ್ಸಾಹ ಮುಂದಿನ ವ್ಯಾಖ್ಯಾನ ಗ್ರಂಥಗಳಿಗೆ ನಾಂದಿಯಾಯಿತು.
(ನೋಡಿ- ಒಡೆಯರ-ಕಾಲದ-ಕನ್ನಡ-ಸಾಹಿತ್ಯ)					(ಎಂ.ಆರ್.ಕೆ.)

ಚಾಮರಾಜ ಒಡೆಯರ್ VII : ಆ. 1731-1734. ದೊಡ್ಡ ಕೃಷ್ಣರಾಜನ ದತ್ತು ಪುತ್ರ. ಮೂಕರಸು ಅಥವಾ ಇಮ್ಮಡಿ ಕಂಠೀರವ ನರಸರಾಜ ಮತ್ತು ಅವನ ಅನಂತರ ಆಳಿದ ದೊಡ್ಡ ಕೃಷ್ಣರಾಜ ಒಡೆಯರ್ ಇವರು ದುರ್ಬಲರಾಗಿದ್ದರಿಂದ ದಳವಾಯಿಗಳು ಪ್ರಬಲರಾಗುತ್ತ ಬಂದರು. ದೊಡ್ಡ ಕೃಷ್ಣರಾಜನಿಗೆ ಮಕ್ಕಳಿರಲಿಲ್ಲವಾದ್ದರಿಂದ ತನ್ನ ಬಂಧುವರ್ಗದ ಚಾಮರಾಜನನ್ನು ದತ್ತುವಾಗಿ ತೆಗೆದುಕೊಂಡ. ಇಮ್ಮಡಿ ಕಂಠೀರವನ ಅನಂತರ ಚಾಮರಾಜ ಪಟ್ಟಕ್ಕೆ ಬಂದ. 7ನೆಯ ಚಾಮರಾಜನ ಆಳ್ವಿಕೆಯಲ್ಲಿ ದಳವಾಯಿಗಳ ಪ್ರಾಬಲ್ಯ ಉನ್ನತಿಗೇರಿ, ನೆಪಮಾತ್ರಕ್ಕೆ ರಾಜನ ಆಳ್ವಿಕೆ ಉಳಿಯಿತು. ದೇವರಾಜಯ್ಯ ಮತ್ತು ಅವನ ಸಂಬಂಧಿ ನಂಜರಾಜಯ್ಯ ಎಂಬ ದಳವಾಯಿಗಳು ಆಡಳಿತ, ಆರ್ಥಿಕ ವ್ಯವಹಾರ ಮತ್ತು ಸೈನ್ಯದ ಮೇಲೆ ತಮ್ಮ ಬಲವಾದ ಹತೋಟಿ ಸ್ಥಾಪಿಸಿದರು. 7ನೆಯ ಚಾಮರಾಜ ದಳವಾಯಿಗಳ ಪ್ರಾಬಲ್ಯವನ್ನು ಮುರಿಯಲು ಯತ್ನಿಸಿದನಾದರೂ ಅವರನ್ನು ಹಿಡಿದು ಶಿಕ್ಷಿಸುವ ಅವಕಾಶ ಲಭಿಸಿದ್ದಾಗ ಉದಾರತೆಯಿಂದ ಅವರನ್ನು ಬಿಟ್ಟುಬಿಟ್ಟ. ಅಧಿಕಾರಚ್ಯುತರಾದ ದಳವಾಯಿಗಳು ರಾಜನ ಮೇಲೆ ಸೇಡು ತೀರಿಸಿಕೊಳ್ಳಲು ಸಮಯ ಕಾಯುತ್ತಿದ್ದರು. ಈ ಮಧ್ಯೆ ಚಾಮರಾಜ ಹಲವು ಸುಧಾರಣೆಗಳನ್ನು ಜಾರಿಗೆ ತಂದ. ಈ ಸುಧಾರಣೆಗಳಿಂದ ಗೊಂದಲ ಪರಿಸ್ಥಿತಿಯುಂಟಾಯಿತು. ಆ ಸಂದರ್ಭವನ್ನು ಉಪಯೋಗಿಸಿಕೊಂಡು ದಳವಾಯಿಗಳು ಪುನಃ ಪ್ರಬಲರಾದರು. ಸೇಡಿನ ಮನೋಭಾವದಿಂದ ದಳವಾಯಿಗಳು 7ನೆಯ ಚಾಮರಾಜನನ್ನೂ ರಾಣಿಯನ್ನೂ ಅವರ ಆಪ್ತರನ್ನೂ ಬಂಧಿಸಿ ಕಬ್ಬಾಳ ದುರ್ಗದಲ್ಲಿ ಬಂಧನದಲ್ಲಿಟ್ಟರು. ಅವನು ಅನಾರೋಗ್ಯಕ್ಕೆ ತುತ್ತಾಗಿ ಸ್ವಲ್ಪಕಾಲದಲ್ಲೇ ತೀರಿಕೊಂಡ.

ಚಾಮರಾಜ VIII : ಆ. 1770-1776. ಇವನಿಗೆ ಬೆಟ್ಟದ ಚಾಮರಾಜನೆಂದು ಹೆಸರು. ನಂಜರಾಜನ ತರುವಾಯ ಪಟ್ಟಕ್ಕೆ ಬಂದ. ಹೈದರ್ ಅತ್ಯಂತ ಪ್ರಬಲನಾಗಿ ಅಧಿಕಾರವನ್ನೆಲ್ಲ ತಾನೇ ವಹಿಸಿಕೊಂಡು ನೆಪಮಾತ್ರಕ್ಕೆ ಚಾಮರಾಜನನ್ನು ಸಿಂಹಾಸನದ ಮೇಲೆ ಕೂಡಿಸಿದ್ದ.

ಚಾಮರಾಜ IX : ಎಂಟನೆಯ ಚಾಮರಾಜನ ಉತ್ತರಾಧಿಕಾರಿ. ಎಂಟನೆಯ ಚಾಮರಾಜನಿಗೆ ಮಕ್ಕಳಿರಲಿಲ್ಲವಾದ್ದರಿಂದ ಅವನ ಸಂಬಂಧಿಯೂ ಕಾರುಗಳ್ಳಿಯ ಕುಟುಂಬವೊಂದರ ಬಾಲಕನೂ ಆದ ಈತನನ್ನು 1776ರಲ್ಲಿ ಹೈದರ್ ಸಿಂಹಾಸನದ ಮೇಲೆ ಕೂರಿಸಿ ತನ್ನ ಆಡಳಿತವನ್ನು ಮುಂದುವರಿಸಿದ. ಹೈದರನ ಪ್ರಾಬಲ್ಯವನ್ನು ಕೊನೆಗಾಣಿಸಿ ರಾಜಮನೆತನದ ಆಡಳಿತವನ್ನು ಪುನಃ ಸ್ಥಾಪಿಸಲು ಯತ್ನಗಳು ನಡೆದುವಾದರೂ ಜಯಪ್ರದವಾಗಲಿಲ್ಲ. 9ನೆಯ ಚಾಮರಾಜ 1796ರಲ್ಲಿ ಮರಣ ಹೊಂದಿದ. ಅವನ ಕುಟುಂಬದವರನ್ನು ಟಿಪ್ಪುಸುಲ್ತಾನ ಗೃಹಬಂಧನದಲ್ಲಿಟ್ಟ.

ಚಾಮರಾಜ ಒಡೆಯರ್ X : ಆ. 1881-1894. ಮುಮ್ಮಡಿ ಕೃಷ್ಣರಾಜ ಒಡೆಯರ ದತ್ತು ಪುತ್ರ. 1831ರಲ್ಲಿ ಮೈಸೂರು ಸಂಸ್ಥಾನವನ್ನು ಬ್ರಿಟಿಷ್ ಸರ್ಕಾರ ಕಮೀಷನರ ಆಳ್ವಿಕೆಗೆ ವಹಿಸಿಕೊಟ್ಟಿತ್ತು. ಆಡಳಿತವನ್ನು ಒಡೆಯರ ಮನೆತನಕ್ಕೆ ಮತ್ತೆ ವಹಿಸಿಕೊಡಬೇಕೆಂದು ಕೃಷ್ಣರಾಜ ಒಡೆಯರು ಬ್ರಿಟಿಷ್ ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸುತ್ತ ಬಂದರು. ಬ್ರಿಟಿಷ್ ಸರ್ಕಾರ ಕೊನೆಗೆ ರಾಜ್ಯವನ್ನು ದೇಶೀಯ ರಾಜರ ಆಳ್ವಿಕೆಗೆ ಒಪ್ಪಿಸಲು ತೀರ್ಮಾನಿಸಿತು. ಬಾಲಕರಾಗಿದ್ದ ಚಾಮರಾಜ ಒಡೆಯರು ಪ್ರಾಪ್ತವಯಸ್ಸಿಗೆ ಬಂದ ಕೂಡಲೇ ಅಧಿಕಾರವನ್ನು ಅವರಿಗೆ ವಹಿಸಿಕೊಡುವುದೆಂದೂ ನಿಗದಿಯಾಯಿತು. ಕೃಷ್ಣರಾಜ ಒಡೆಯರ್ 1868ರಲ್ಲಿ ಮರಣ ಹೊಂದಿದರು. ಚಾಮರಾಜ ಒಡೆಯರ ಪಟ್ಟಾಭಿಷೇಕ ಮಹೋತ್ಸವವನ್ನು ನೆರವೇರಿಸಲಾಯಿತು. 1881ರ ಮಾರ್ಚ್ 25ರಂದು ಹದಿನೆಂಟು ವರ್ಷ ತುಂಬಿದ ಚಾಮರಾಜ, ಚಾಮರಾಜೇಂದ್ರ ಒಡೆಯರ್ ಎಂಬ ಹೆಸರಿನಿಂದ ಸಿಂಹಾಸನಾರೋಹಣ ಮಾಡಿ ಅಧಿಕಾರ ವಹಿಸಿಕೊಂಡರು. ಗಾರ್ಡನ್ ಬ್ರಿಟಿಷ್ ರೆಸಿಡೆಂಟಾಗಿಯೂ ಸಿ. ರಂಗಾಚಾರ್ಲು ದಿವಾನ್ ಆಗಿಯೂ ನೇಮಕವಾದರೂ.

ಚಾಮರಾಜ ಒಡೆಯರು ಅಧಿಕಾರ ವಹಿಸಿಕೊಂಡ ಅನಂತರ ಬ್ರಿಟಿಷ್ ಸರ್ಕಾರ ಅದುವರೆಗೂ ತನ್ನ ವಶದಲ್ಲಿದ್ದ ಶ್ರೀರಂಗಪಟ್ಟಣವನ್ನು ಬಿಟ್ಟುಕೊಟ್ಟು ಬೆಂಗಳೂರಿನ ದಂಡು ಪ್ರದೇಶವನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ದೂರ ದೃಷ್ಟಿಯ ಮಹಾರಾಜರು ಮತ್ತು ದಿವಾನ್ ರಂಗಾಚಾರ್ಲು ಆಡಳಿತದಲ್ಲಿ ಅನೇಕ ಸುಧಾರಣೆಗಳನ್ನು ಆಚರಣೆಗೆ ತಂದರು. ಭಾರತದ ದೇಶೀಯ ಸಂಸ್ಥಾನವೊಂದರಲ್ಲಿ ಪ್ರಪ್ರಥಮವಾಗಿ ಪ್ರಜಾಪ್ರತಿನಿಧಿ ಸಭೆಯನ್ನು ಸ್ಥಾಪಿಸಿದ ಕೀರ್ತಿ ಚಾಮರಾಜೇಂದ್ರ ಒಡೆಯರಿಗೆ ಸಲ್ಲುತ್ತದೆ. 1883ರ ಅಕ್ಟೋಬರ್ ತಿಂಗಳಲ್ಲಿ ಮೈಸೂರು ಸಂಸ್ಥಾನದ ಪ್ರಜಾಪ್ರತಿನಿಧಿ ಸಭೆ ಮೊಟ್ಟ ಮೊದಲ ಬಾರಿಗೆ ಸೇರಿತು. ಆ ಸಭೆ ಒಟ್ಟು 144 ಮಂದಿ ಸದಸ್ಯರಿಂದ ಕೂಡಿತ್ತು. ಪ್ರತಿವರ್ಷವೂ ದಸರಾ ಸಮಾರಂಭ ಕಾಲದಲ್ಲಿ ರಾಜ್ಯದ ಆಯವ್ಯಯವನ್ನು ಸಭೆಯ ಮುಂದೆ ಮಂಡಿಸಿ ಅದರ ಅಭಿಪ್ರಾಯವನ್ನು ಪಡೆಯುವ ಪದ್ಧತಿ ಜಾರಿಗೆ ಬಂದಿತು.

1883ರಲ್ಲಿ ಸಿ. ರಂಗಾಚಾರ್ಲು ಮರಣ ಹೊಂದಿದ್ದರಿಂದ ಕೆ. ಶೇಷಾದ್ರಿ ಅಯ್ಯರನ್ನು ದಿವಾನರಾಗಿ ನೇಮಿಸಲಾಯಿತು. ಚಾಮರಾಜ ಒಡೆಯರ ಪ್ರಜಾಹಿತದೃಷ್ಟಿ ಮತ್ತು ದಿವಾನರ ವಿವೇಕ ಹಾಗೂ ಜಾಣ್ಮೆಯಿಂದ ರಾಜ್ಯದಲ್ಲಿ ಪ್ರಗತಿಯುಂಟಾಯಿತು. ವಿದ್ಯಾಭ್ಯಾಸ, ಆರೋಗ್ಯ, ಅರಣ್ಯಸಂಪತ್ತು, ಮೊದಲಾಗಿ ಎಲ್ಲ ಕ್ಷೇತ್ರಗಳಲ್ಲೂ ಪ್ರಗತಿಯುಂಟಾಗಿ ರಾಜ್ಯದ ಆದಾಯವೂ ಪ್ರಜೆಗಳ ನೆಮ್ಮದಿಯೂ ಇಮ್ಮಡಿಸಿದುವು. ಆಡಳಿತ ಹುದ್ದೆಗಳಿಗೆ ಪ್ರತಿಭಾವಂತರನ್ನು ಆರಿಸಲು ಸಿವಿಲ್ ಪರೀಕ್ಷೆಯನ್ನು ನಡೆಸುವ ಪದ್ಧತಿಯನ್ನು ಜಾರಿಗೆ ತರಲಾಯಿತು. 1892ರಲ್ಲಿ ಭಾರತದ ವೈಸ್‍ರಾಯ್ ಲಾರ್ಡ್ ಲ್ಯಾನ್ಸ್‍ಡೌನ್ ಮೈಸೂರಿಗೆ ಭೇಟಿ ನೀಡಿ, ಇಲ್ಲಿಯ ಪ್ರಗತಿಯನ್ನು ಕಂಡು ಸುಪ್ರೀತನಾಗಿ ಇಡೀ ಭಾರತದಲ್ಲಿ ಪ್ರಭುವಿಗೂ ಪ್ರಜೆಗಳಿಗೂ ಇಂಥ ಮಧುರಬಾಂಧವ್ಯ ಬೆಳೆದಿರುವುದೂ ಇಂಥ ಸರ್ಕಾರವೇರ್ಪಟ್ಟಿರುವುದೂ ಪ್ರಜಾಕ್ಷೇಮವೇ ಸರ್ಕಾರದ ಪರಮಾದರ್ಶವೆಂಬ ಘನತತ್ತ್ವ ಯಶಸ್ವಿಯಾಗಿರುವುದೂ ಮೈಸೂರಿನಲ್ಲಿ ಮಾತ್ರ ಎಂಬುದಾಗಿ ಪ್ರಶಂಸಿಸಿದ. ಚಾಮರಾಜ ಒಡೆಯರ್ 1894ರಲ್ಲಿ ಭಾರತದ ಪ್ರವಾಸ ಕೈಗೊಂಡು ಮುಂಬಯಿ, ಅಲಹಾಬಾದ್ ಮುಖಾಂತರ ಕಲ್ಕತ್ತ ನಗರವನ್ನು ತಲುಪಿ, ಅನಾರೋಗ್ಯದಿಂದಾಗಿ 1894ರ ನವೆಂಬರ್ 28ರಂದು ಅಲ್ಲಿ ಮರಣ ಹೊಂದಿದರು.						(ಜಿ.ಆರ್.ಆರ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ